Skip to main content
ಕತ್ತಲು ಆವರಿಸಿದ ಸಮಾಜಕ್ಕೆ ಬೆಳಕು ಚೆಲ್ಲಿದ ಪಂಜು ಮತ್ತು ಇತರ ಕಥೆಗಳು

ಕತ್ತಲು ಆವರಿಸಿದ ಸಮಾಜಕ್ಕೆ ಬೆಳಕು ಚೆಲ್ಲಿದ ಪಂಜು ಮತ್ತು ಇತರ ಕಥೆಗಳು

ಕತ್ತಲು ಆವರಿಸಿದ ಸಮಾಜಕ್ಕೆ ಬೆಳಕು ಚೆಲ್ಲಿದ: ಪಂಜು ಮತ್ತು ಇತರ ಕಥೆಗಳು

ರಾಯಚೂರು : ಪ್ರಕೃತಿಯಲ್ಲಿ ನಡೆಯುವ ಪ್ರಕ್ರಿಯೆಗಳಂತೆ ಮಾನವನ ಜೀವನದಲ್ಲಿ ಸಹ ಆನೇಕ ಏರಿಳಿತಗಳನ್ನು ಕಾಣುತ್ತೇವೆ. ಮಾನವನ ಒಳಿತಿಗೆ ನಿಸರ್ಗ ಅನುಕೂಲ ಮಾಡುವುದರತ್ತ ಹೆಜ್ಜೆ ಇಟ್ಟರೆ, ಮನುಷ್ಯ ಮಾತ್ರ ಪ್ರಕೃತಿಗೆ ವಿರುದ್ಧವಾಗಿ ಸಾಗುತಿದ್ದಾನೆ. ಈ ಅಪಾಯವನ್ನು ತಡೆಯಲು ಅನೇಕ ಹೋರಾಟ, ಚಳುವಳಿ, ಲೇಖಕನ, ಕಥೆಗಳು ಸಮಾಜವನ್ನು ಸಾಂಗವಾಗಿ ಎಚ್ಚರಿಸುತ್ತಿವೆ. ಆ ದಿಸೆಯಲ್ಲಿ ಮನುಕುಲದ ಒಳಿತಿಗಾಗಿ ಸಾಹಿತಿಗಳಿಂದ ಕಥೆ, ಕವನ, ಚುಟುಕು, ಗಜಲ್ ಇತ್ಯಾದಿ ಜನ್ಮತಾಳಿವೆ.

Raichur

ಅದರಲ್ಲಿ ಕಥಾ ಸಾಹಿತ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಮರೇಶ ನುಗಡೋಣಿ, ರಾಜಶೇಖರ ನೀರಮಾನ್ವಿ, ಚಿದಾನಂದ‌ ಸಾಲಿ, ಹೆಚ್.ಎಸ್ ಅನುಪಮಾ ಅವರು ಕಥೆಗಾರರ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ. ಇವರ ಆಲೋಚನೆಗಳಿಗೆ ತಾಳೆಯಾಗುವ ಮತ್ತು ಇವರ ಕಥೆಗಳ ಚಿಂತನೆಯಂತೆ ಸಾಗುವ ಮತ್ತೊಬ್ಬರಾದ ಮಹಾದೇವ ಎಸ್. ಪಾಟೀಲ ಅವರ ಕಥೆಗಳು ಸಹ ದಿಗ್ಗಜ ಕಥೆಗಾರರ ಸಾಲಿಗೆ ಸೇರ್ಪಡೆಯಾಗುವ ಲಕ್ಷಣಗಳು “ಪಂಜು ಮತ್ತು ಇತರ ಕಥೆಗಳು” ಕಂಡುಬರುತ್ತವೆ. ಶಿವ್ನಪಾದ, ಹಳ್ಳಿಮಂದಿ ಕೊಳ್ಳಿದೆವ್ವ, ಹಣೇಬರ, ಪಂಜು, ಪವಾಡ, ಕುಣಿಕೆ, ಹೀಗೂ ಉಂಟೆ, ಮೂಕಸಾಕ್ಷಿ, ಪಂಜರ, ಪ್ರಳಯ ಒಟ್ಟು ಹತ್ತು ಕಥೆಗಳಿವೆ. ಪಾಟೀಲ ಅವರ ಕಥೆಗಳು ವಾಸ್ತವಿಕ ಕತ್ತಲಿನ ಬದುಕಿಗೆ ಬೆಳಕು ಚೆಲ್ಲುತ್ತವೆ.

ಶಿವ್ನಪಾದ ಕಥೆಯಲ್ಲಿ ವೈಚಾರಿಕ ಚಿಂತನೆ ಇರುವ ಹಳ್ಳಿ ಹುಡುಗ ಶಿವರಾಜ ಹಾಸ್ಟೆಲ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವಾಗ ಒಂದು ದಿನ ಹಲ್ಲಿಯೊಂದು ಮೈಮೇಲೆ ಬೀಳುತ್ತದೆ. ಸಹಪಾಠಿಗಳು ಏಯ್ ಶಿವು ಹೋಗು ಮೈ ತೊಳ್ಕೊಂಡು ಹನುಮಪ್ಪನ ಗುಡಿಗೆ ಹೋಗಿ ಬಾ ಎಂದು ಹೇಳುವ ಮಿತ್ರರ ಗುಂಪು ಒಂದೆಡೆಯಾದರೆ, ಮತ್ತೊಂದು ಕಡೆ ವೈಚಾರಿಕ ಚಿಂತನೆಯ ಅನುಭವ ಇವೆರಡರ ನಡುವಿನ ವಾಸ್ತವಿಕ ಜೀವನದ ಕುರಿತು ಕಥೆ ಮೂಡಿ ಬಂದಿರುವ ಪರಿ ಬಹಳ ಅದ್ಬತವಾಗಿದೆ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಾಹಿತ್ಯ ಬದಲಾವಣೆ ಹೊಂದುತ್ತ ಬಂದಿದೆ. ಆ ಸಾಹಿತ್ಯದ ಬಗೆಗಳಲ್ಲಿ ಕಥೆಯ ಪ್ರಕಾರ ಜನರನ್ನು ಹೆಚ್ಚಾಗಿ ಆಕರ್ಷಿಸಿದೆ ಕಾರಣವಿಷ್ಟೇ ಕಥೆಯೆಂಬುದು ಹಳ್ಳಿ ಜನರು, ಅನಕ್ಷರಸ್ಥರು, ವಿಧ್ಯಾಭ್ಯಾಸ ಇರದ ವ್ಯಕ್ತಿಗಳ ಆಳದ ಅಂತರಂಗವನ್ನು ಹೊಕ್ಕಿರುವುದು ಸತ್ಯ. ಪ್ರಸ್ತುತ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಹಸಿದವನ ಅಂತರಂಗದಿಂದ ಉದಯಿಸುವ ಸಾಹಿತ್ಯ ಅತ್ಯಂತ ದೀರ್ಘಾವಧಿವರೆಗೆ ನೆಲೆಸಬಲ್ಲದು ಎಂಬುದಕ್ಕೆ ಕನ್ನಡ ಹಿರಿಯ ಸಾಹಿತಿಗಳ ಬರಹವೆ ಸಾಕ್ಷಿಯಾಗಿವೆ. ರಾಜ ರಾಣಿ, ಸಾಮ್ರಾಜ್ಯ, ಸೈನ್ಯ, ಹಕ್ಕಿಗಳು, ಕಾಗಕ್ಕ ಗುಬ್ಬಕ್ಕ, ನಿಸರ್ಗ ಕುರಿತು ಬಾಲ್ಯದಲ್ಲಿ ನಾವೆಲ್ಲರೂ ಕೇಳಿರುವ ಕಥೆಗಳಾಗಿವೆ. ಹಸಿವು, ಬಡತನ ಇರುವ ಪ್ರದೇಶಗಳಲ್ಲಿ ಸಾಹಿತ್ಯ ಹಲವು ರೂಪದಲ್ಲಿ ಪ್ರಕಟವಾಗುತ್ತಿವೆ. ಅದಕ್ಕೆ ನಮ್ಮ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅನೇಕ ಸಾಹಿತ್ಯದ ಪ್ರಕಾರ ಜನ್ಮ ತಾಳಿರುವುದು.

ಹಳ್ಳಿಮಂದಿ ಕೊಳ್ಳಿದೆವ್ವ ಕಥೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿ ಹೆಂಗಸರು ತವರು ಮನೆಗೆ ಹೆರಿಗೆಗೆ ಬಂದಾಗ ಆ ಗರ್ಭಿಣಿ ತಾಯಿಗೆ ಅತ್ಯುತ್ತಮ ವೈದ್ಯರು ಸೂಲಗಿತ್ತಿ ಆಗಿರುತಿದ್ದರು. ಸುಮಾ ಎಂಬ ವಿವಾಹಿತಳಿಗೆ ತವರು ಮನೆಯಲ್ಲಿ ಹೆರಿಗೆ ಮಾಡುವ ಸೂಲಗಿತ್ತಿ ಹನುಮವ್ವಳ ಸೇವೆ, ಬಹಳ ಅನನ್ಯವಾದದ್ದಾಗಿದೆ. ಹಣೇಬರ ಕಥೆಯಲ್ಲಿ ಗಂಗವ್ವ, ಮೂಲಿಮನಿ ಶೇಖರ್, ಪ್ರಕಾಶ, ಸಿದ್ದಪ್ಪಜ್ಜ, ಇವರ ಪಾತ್ರಗಳು ಓದುವುದನ್ನು ಬಿಡದಂತೆ ಹಾಗೆ ಕೂರಿಸುತ್ತವೆ. ಹಣೇಬರ ಮುಂದುವರಿದ ಭಾಗದಲ್ಲಿ ಕಥೆ ಪ್ರತಿಯೊಬ್ಬರನ್ನೂ ದಟ್ಟವಾಗಿ ಕಾಡುವಂತಿದೆ. ಗಂಗವ್ವ ಗಂಡನನ್ನು ಮೋಸದಿಂದ ಸಾಯಿಸಿ ನಂತರ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದುತ್ತಾಳೆ. ಇದರಿಂದ ನಮ್ಮ ಮನೆ ಮರಿಯಾದೆ ಹಾಳಾಯಿತೆಂದು ಮಗ ಪ್ರಕಾಶ ಹರ್ತಗೊಡ್ಲಿ ತೊಗೊಂಡು ತಾಯಿ ಮತ್ತು ಪರ ಪುರುಷನನ್ನು ಕತ್ತರಿಸಿ ಹಾಕುತ್ತಾನೆ. ಈ ಕೃತ್ಯ ತಾತ್ವಿಕವಾಗಿ ತಪ್ಪೆನಿಸಿದರು ವಾಸ್ತವಿಕವಾಗಿ ಪಂಜು ಕಥೆ ಓದುವವರ ಕಣ್ಣು ಕೆಂಪಾಗಿಸುತ್ತದೆ.

ಪಂಜು ಕಥೆಗಳು ಬರೆದ ಮಹಾದೇವ ಎಸ್ ಪಾಟೀಲ ಅವರು ಬಾಲ್ಯದ ದಿನಗಳಿಂದ ಸಾಹಿತ್ಯದ ಓದು ಹವ್ಯಾಸ ಹಚ್ಚಿಕೊಂಡು ಬೆಳೆದವರು, ಇವರು ಹೀಗಾಗಲೇ ಬಿಸಿಲು ಬಿದ್ದ ರಾತ್ರಿ, ಸುಡುವ ತಂಗಾಳಿ, ಗಾಂಧಿ ಬಜಾರು, ಇತ್ಯಾದಿ ಕೃತಿಗಳನ್ನು ರಚಿಸಿ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಚಾಪು ಮೂಡಿಸಿದ್ದಾರೆ. ಪಂಜು ಕೃತಿಗೆ ನಾಡಿನ ಹಿರಿಯ ಕಥೆಗಾರರಾದ ಕೇಶವ ಮಳಗಿ ಅವರು ಮುನ್ನುಡಿಯಲ್ಲಿ “ಬಯಲುಸೀಮೆ ಪಾಲಿಸಿದ ಅನುಭವದ್ರವ್ಯವೇ ಇಲ್ಲಿನ ಬಹುಪಾಲು ಕಥೆಗಳ ಜೀವಾಳ ಮತ್ತು ಕೇಂದ್ರಬಿಂದು” ಎಂದಿದ್ದಾರೆ, ಡಾ. ಅಮರೇಶ ನುಗಡೋಣಿ ಅವರು ಬೆನ್ನುಡಿಯಲ್ಲಿ “ಮಹಾದೇವ ಎಸ್.ಪಾಟೀಲ ಅವರ ಪಂಜು ಕಥೆಗಳು ಕೆಲವು ವಿಶೇಷ ಗುಣಗಳಿಂದಲೇ ಓದುಗರ ಗಮನ ಸೆಳೆಯಬಲ್ಲವು” ಎಂದು ಬೆನ್ನುತಟ್ಟಿದ್ದಾರೆ. ಇವರ ಕಥೆಗಳು ಹಳ್ಳಿಗಾಡಿನ ಜನಜೀವನದ ಘಟನೆಗಳನ್ನು ಕಣ್ಣಾರೆ ಕಂಡು ಬರವಣಿಗೆಯ ರೂಪದಲ್ಲಿ ಅನಾವರಣಗೊಳಿಸಿದ್ದಾರೆ.

ಪಂಜು ಕಥೆಯಲ್ಲಿ ರಾಮ ಸೌಮ್ಯಳ ಪ್ರೀತಿ, ವಿರಹ ಅಗಲಿಕೆ ದೂರವಾದ ಕ್ಷಣ, ದೊಡ್ಡೆಗೌಡ ನಾವು ಮೇಲ್ಜಾತಿಯವರೆಂದು ಮೈಸೂರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಬಿಟ್ಟು ಬಂದಿದ್ದೇನೆಂದು ಸುಳ್ಳು ಹೇಳಿ ಮಗಳನ್ನು ಹೊಲದಲ್ಲಿ ಸಾಯಿಸಿರುತ್ತಾನೆ.

ಸಿದ್ದನ ಮಾತಿನಿಂದ ರಾಮನಿಗೆ ವಿಷಯ ತಿಳಿಯುತ್ತದೆ. ಜಾತಿವ್ಯವಸ್ಥೆ ಎಷ್ಟೊಂದು ಮಾರಕವೆಂದು ಈ ಪಂಜು ಕಥೆಯಿಂದ ತಿಳಿಯುತ್ತದೆ. ಪಂಜರ ಕಥೆಯೊಳಗೆ ಕಿರಣ್ ಮತ್ತು ರಂಜನಿ ನಡುವಿನ ಪ್ರೀತಿ ವಿರಹ ಅಗಲಿಕೆ ಹಾಗೂ ತಾಯಿಯನ್ನು ಕಳೆದುಕೊಂಡ ರಂಜನಿಗೆ ಅಂತಿಮವಾಗಿ ತಾಯಿ ಸಿಕ್ಕಿದ್ದು ಓದುಗರಿಗೆ ನಿಟ್ಟುಸಿರು ಬಿಟ್ಟಂತಾಗುತ್ತದೆ. ಇವರ ನಡುವಿನ ಸಂಪ್ರದಾಯಸ್ಥ ಭಾವನೆಗಳಿಂದಾಗಿ ಇಬ್ಬರು ದೂರವಾದರು. ಇದಕ್ಕೆ ಜಾತಿವ್ಯವಸ್ಥೆ ಕಾರಣವೆಂದರು ಅಚ್ಚರಿಯಿಲ್ಲ ಎನಿಸುತ್ತದೆ. ರಂಜನಿಯನ್ನು ಈ ಸಾಮಾಜಿಕ ವ್ಯವಸ್ಥೆ ನಡೆಸಿಕೊಂಡ ರೀತಿ ಅತ್ಯಂತ ಶೋಚನೀಯ ಆಗಿದೆ. ಹತ್ತು ವರ್ಷಗಳ ನಂತರ ಮಾಲೂರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲು ಬಂದ ಕಿರಣನಿಗೆ ಭೂಕಂಪವಾದಂತೆ ಮನಸ್ಸಿಗೆ ಆಘಾತವಾಗುತ್ತದೆ. ಇಂತಹ ಕಥೆಗಳನ್ನು ಸೂಕ್ಷ್ಮವಾಗಿ, ಅರ್ಥಪೂರ್ಣವಾಗಿ, ಓದುಗರಿಗೆ ನಿರಾಸೆ ಮೂಡದಂತೆ ಎಚ್ಚರವಹಿಸಿ ಕಥೆಗಳನ್ನು ಬರೆಯುವ ಕಲೆ ಎಲ್ಲರಿಗೂ ಸಿದ್ದಿಸುವುದಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಈ ಕಥೆಗಳನ್ನು ಓದಿದ ಪ್ರತಿಯೊಬ್ಬರಿಗೂ ಈ ಕಥೆ ನನ್ನ ಜೀವನದ ಒಂದು ಭಾಗದಂತೆ ಅನುಭವವಾಗುತ್ತದೆ.

ಈ ಅನುಭವವೇ ಲೇಖಕನ ಜಾಣ್ಮೆ,ಬುದ್ಧಿವಂತಿಕೆ, ಚಿಂತನೆ, ಎಚ್ಚರಿಕೆ, ಪ್ರಜ್ಞೆ, ಇವೆಲ್ಲವುಗಳು ಮಹಾದೇವ ಎಸ್ ಪಾಟೀಲ ಅವರನ್ನು ಕಥೆಗಾರರ ಸಾಲಿನಲ್ಲಿ ನಿಲ್ಲಿಸುವುದರಲ್ಲಿ ಸಂಶಯವಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಮರಾಠ ಸಾಮ್ರಾಜ್ಯದಲ್ಲಿ ಶಿವಾಜಿ ಯಶಸ್ವಿ ರಾಜನಾಗಲು ಅವರ ತಾಯಿ ಜೀಜಾಬಾಯಿ ಗುರು ದಾದಾಜಿಕೊಂಡದೇವ ಅವರು ಹೇಳುತಿದ್ದ ಕಥೆಗಳು ಪ್ರೇರಣೆಯಾಗಿದ್ದವು. ಅದರಂತೆ ಇಂದಿನ ದಿನಗಳಲ್ಲಿ ನಮ್ಮ ಮಕ್ಕಳು ಯಶಸ್ವಿಯಾಗಲು ಮೊದಲು ಪೋಷಕರಾದ ನಾವುಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಪುಸ್ತಕಗಳು ಅತ್ಯುತ್ತಮ ಜೀವನ ರೂಪಿಸುತ್ತವೆ. ಆದ್ದರಿಂದ ಮಕ್ಕಳಿಗೆ ಒಳ್ಳೆಯ ಕಥೆಗಳು ಇರುವ ಪುಸ್ತಕಗಳನ್ನು ಕೊಡಿಸಿ ಓದಿಸುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಹುಟ್ಟುತ್ತದೆ. ಅಂತಿಮವಾಗಿ ಮಹಾದೇವ ಎಸ್ ಪಾಟೀಲ ಅವರ ಕಥೆಗಳು ಯಾವ ಕಾಲಕ್ಕೂ ಪ್ರಸ್ತುತ ಎನ್ನಿಸುವ ಕಥೆಗಳಾಗಿವೆ. ಹಿರಿಯ ಸಾಹಿತಿಗಳ ಮಾರ್ಗದರ್ಶನ, ಹಾಗೂ ಅವರ ಕಥಾ ಸಾಹಿತ್ಯವನ್ನು ಅನುಸರಿಸಿದರೆ ಕಥಾ ಲೋಕದಲ್ಲಿ‌ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಬಲ್ಲರು. ಮತ್ತಷ್ಟು ಕೃತಿಗಳಿಗೆ ಅವರು ಅಣಿಯಾಗಲೆಂದು ಆಶಿಸುವೆ.

 

ಪ್ರತಿಗಳಿಗಾಗಿ ಸಂಪರ್ಕಿಸಿ: ಕೃತಿ: ಪಂಜು‌ ಮತ್ತು ಇತರ ಕಥೆಗಳು ಕಂಠಿ ಬಸವ ಪ್ರಕಾಶನ ಭೂಪೂರ (ರಾಂ) ಬೆಲೆ: ೧೨೦/- ಮೊಬೈಲ್ ನಂಬರ್: 7411140065

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.