ಯುವರ್ ಲೈಫ್ ಗೆ ಸಮಂತ ಅಕ್ಕನೇನಿ ಅತಿಥಿ ಸಂಪಾದಕಿ
ಯುವರ್ ಲೈಫ್ ಗೆ ಸಮಂತ ಅಕ್ಕನೇನಿ ಅತಿಥಿ ಸಂಪಾದಕಿ.

ಯುವರ್ ಲೈಫ್ co.in ಎನ್ನುವುದು ಇತ್ತೀಚೆಗೆ ಆರಂಭವಾಗಿ ಅಪಾರ ಜನಪ್ರಿಯತೆ ಪಡೆದಿರುವ ಜಾಲತಾಣವಾಗಿದೆ. ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಉತ್ತಮ ಆರೋಗ್ಯವನ್ನು ಹೊಂದುವುದು ಹೇಗೆ ಎನ್ನುವುದು ಇಡೀ ಜಗತ್ತಿನ ಮುಂದಿರುವ ಪ್ರಶ್ನೆ ಮತ್ತು ಸವಾಲಾಗಿದೆ.
ಈ ನಿಟ್ಟಿನಲ್ಲಿ ಉಪಾಸನ ಕಮಿನೇನಿ ಕೊನಿಡೇಲ ವ್ಯವಸ್ಥಾಪಕ ನಿರ್ದೇಶಕರಾಗಿರುವ ಯುವರ್ ಲೈಫ್ ನಲ್ಲಿ ಉತ್ತಮ ಜೀವನ ಶೈಲಿಯ ಮೂಲಕ ಆರೋಗ್ಯಕರ ಬದುಕನ್ನು ರೂಪಿಸಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ವೃತ್ತಿಪರ ವೈದ್ಯರು, ಆಹಾರ ತಜ್ಞರು, ಫಿಟ್ನೆಸ್ ತರಬೇತುದಾರರು ತಮ್ಮ ಅನುಭವ, ಮಾಹಿತಿಗಳನ್ನಿಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಯಾವ ಬಗೆಯ ಆಹಾರ ಪದ್ಧತಿ ಅನುಸರಿಸಿದರೆ ಕಾಯಿಲೆಗಳಿಂದ ಮುಕ್ತರಾಗಬಹುದು ಎಂಬೆಲ್ಲ ಮಾಹಿತಿಗಳನ್ನು ಯುವರ್ ಲೈಫ್ ತಾಣದಲ್ಲಿ ಬರವಣಿಗೆ ಮತ್ತು ತಜ್ಞರ ವಿಡಿಯೋಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ. ಆರೋಗ್ಯದ ವಿಚಾರದಲ್ಲಿ ಜನರ ಚಿಂತನೆ ಬದಲಿಸುವ, ಗಮನಾರ್ಹವಾದ ವಿಷಯಗಳ ಮೂಲಕ ಶಿಕ್ಷಿತರನ್ನಾಗಿಸುವ ಉದ್ದೇಶ ಯುವರ್ ಲೈಫ್ ನದ್ದು ಎನ್ನುವುದು ಉಪಾಸನ ಅವರ ಅಭಿಪ್ರಾಯ. ನಟಿ ಸಮಂತ ಅಕ್ಕಿನೇನಿ ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಮೊದಲಿನಿಂದಲೂ ಅಪಾರ ಕಾಳಜಿ ವಹಿಸಿಕೊಂಡು ಬಂದವರು.

ಫಿಟ್ನೆಸ್ ಬಗ್ಗೆಯೂ ವಿಶೇಷ ಒಲವಿರಿಸಿಕೊಂಡಿರುವ ಸಮಂತ ಸಾವಯವ ಕೃಷಿ ಪದ್ದತಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇಂಥ ಸಮಂತ ಈಗ ಯುವರ್ ಲೈಫ್ ನ ಅತಿಥಿ ಸಂಪಾದಕಿಯಾಗಿದ್ದಾರೆ. ಸುಸ್ಥಿರ ಆಹಾರ ಪದ್ಧತಿ ಮೂಲಕ ಸಮಗ್ರ ಆರೋಗ್ಯ ಹೊಂದುವುದು ಹೇಗೆ? ಮತ್ತು ಭಾವನಾತ್ಮಕ ಸಾಮರಸ್ಯದಿಂದ ಮುನ್ನಡೆಯುವ ಬಗೆ ಯಾವುದು? ಎಂಬಿತ್ಯಾದಿ ವಿಚಾರಗಳನ್ನು ಸಮಂತ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುವ ಮಾರ್ಗ ಯಾವುದು ಎನ್ನುವುದನ್ನೆಲ್ಲ ಸಮಂತ ಸವಿವರವಾಗಿ ಯುವರ್ ಲೈಫ್ ನಲ್ಲಿ ವಿವರಿಸಲಿದ್ದಾರೆ. ಭಾರತೀಯ ಕಾರ್ಪೊರೆಟ್ ವಲಯದಲ್ಲಿ 14 ದಶಲಕ್ಷಕ್ಕೂ ಹೆಚ್ಚು ಆರೋಗ್ಯ ಸೇವಾ ಪೂರೈಕೆದಾರರು ಯುವರ್ ಲೈಫ್ ಅನ್ನು ಬೆಂಬಲಿಸುತ್ತಿದ್ದಾರೆ. ಇಂಥ ಜಾಲತಾಣಕ್ಕೆ ಅತಿಥಿ ಸಂಪಾದಕಿಯಾಗಿ ಸಮಂತ ಕಾರ್ಯನಿರ್ವಹಿಸುತ್ತಿರುವುದು ಯುವರ್ ಲೈಫ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ.
Recent comments