Skip to main content
ಮುಹೂರ್ತ ಆಚರಿಸಿದ ʻಅಲಂಕಾರ್ ವಿದ್ಯಾರ್ಥಿʼ.

ಮುಹೂರ್ತ ಆಚರಿಸಿದ ʻಅಲಂಕಾರ್ ವಿದ್ಯಾರ್ಥಿʼ.

*ಮುಹೂರ್ತ ಆಚರಿಸಿದ ʻಅಲಂಕಾರ್ ವಿದ್ಯಾರ್ಥಿʼ.

Kannada new film

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿ, ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಪ್ರಮೋದ್. ನಂತರ ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಭವ, ರತ್ನನ್ ಪ್ರಪಂಚ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಮೋದ್ ನಟನೆಯ ಕೆಲವು ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಈಗ ʻಅಲಂಕಾರ್ ವಿದ್ಯಾರ್ಥಿʼ ಎನ್ನುವ ವಿಭಿನ್ನ ಶೀರ್ಷಿಕೆಯ ಸಿನಿಮಾದ ಮುಹೂರ್ತ ನೆರವೇರಿದೆ. ಅನ್ನಪೂರ್ಣೇಶ್ವರಿ ನಗರದ ವಿನಾಯಕ-ವೆಂಕಟೇಶ್ವರ ದೇವಾಲಯದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ನಟ ಡಾಲಿ ಧನಂಜಯ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಶುಭ ಕೋರಿದರು.

ಅಲಂಕಾರ್ ವಿದ್ಯಾರ್ಥಿ – ಇದು ಎಪ್ಪತ್ತು ಎಂಭತ್ತರ ದಶಕದಲ್ಲಿ ಲಾಸ್ಟ್ ಬೆಂಚ್ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದ ರೀತಿ. ನಮ್ಮ ಸಿನಿಮಾದಲ್ಲಿ ಹೀರೋ ಕೂಡಾ ಹಾಗೇ. ಓದು ತಲೆಗೆ ಹತ್ತದಿದ್ದರೂ ಅಲಂಕಾರಕ್ಕಾಗಿ ಕಾಲೇಜಿಗೆ ಬರುತ್ತಿರುತ್ತಾನೆ. ಆದರೂ ಕಾಲೇಜಿನಲ್ಲಿ ಪಾಠ ಮಾಡುವ ಗುರುಗಳಿಂದ ಹಿಡಿದು ಎಲ್ಲರಿಗೂ ಇವನೆಂದರೆ ಒಂಥರಾ ಮುದ್ದು. ಲಾಸ್ಟ್ ಬೆಂಚಲ್ಲೇ ಓದಿಕೊಂಡಿದ್ದವನು ಕಾಲೇಜಿಗೆ ಸೇರುವ ಪ್ರೋಸೆಸ್ ಹೇಗಿರುತ್ತದೆ? ಪ್ರಿನ್ಸಿಪಾಲ್ ಜೊತೆ ಆತನ ಕಮ್ಯುನಿಕೇಷನ್ ಯಾವ ರೀತಿ ಇರುತ್ತದೆ? ಅವನ ತಂದೆ ತಾಯಿ, ಅವನಿಗೆ ಸಿಗುವ ಸ್ನೇಹಿತರು, ಜೊತೆಯಾಗುವ ಹುಡುಗಿಯ ಸುತ್ತ ಕತೆ ತೆರೆದುಕೊಳ್ಳುತ್ತದೆ. ಪಾಸಾಗಿರುವ ಹುಡುಗನಿಗೆ ಬೇಸಿಗೆ ಕಾಲದಲ್ಲಿ ಮಾತ್ರ ರಜೆ ಸಿಗುತ್ತದೆ. ಅದೇ ಫೇಲಾಗಿ ಎರಡು ವರ್ಷ ಕಾಲ ಕಳೆದವನು ಬೇಸಿಗೆ, ಮಳೆ, ಚಳಿ ಮೂರೂ ಸೀಜನ್ನಿನಲ್ಲಿ ಮನೇಲೇ ಇರ್ತಾನೆ. ಇಂಥಾ ಹುಡುಗ ಮ್ಯಾನೇಜ್ ಮೆಂಟ್ ಸೀಟ್ ತಗೊಂಡು ಕಾಲೇಜಿಗೆ ಬರ್ತಾನೆ. ಈತನ ಬದುಕು ಹೇಗಿರುತ್ತದೆ ಅನ್ನೋದೇ ಅಲಂಕಾರ್ ವಿದ್ಯಾರ್ಥಿ ಚಿತ್ರದ ತಿರುಳು. ಅಲಂಕಾರ್ ವಿದ್ಯಾರ್ಥಿ ಅಂದರೆ ಏನು ಅನ್ನೋದು ಹಲವರ ಪ್ರಶ್ನೆಯಾಗಿತ್ತು.

ಇದಕ್ಕೆ ಉತ್ತರ ನೀಡಲೆಂದೇ ವಿಶೇಷ ಪೋಸ್ಟರ್ ಅನಾವರಣ ಮಾಡಿದ್ದೇವೆ. ʻʻಈ ಕೆಳಗೆ ನಮೂದಿಸಿರುವ ವ್ಯಕ್ತಿಯು ತನ್ನ ತಾಯಿಯ ಸಹಾಯದಿಂದ ಪಾಸಾದ.ʼʼ ಎಂದು ಪೋಸ್ಟರಿನಲ್ಲಿ ಹೇಳಲಾಗಿದೆ. ತಾಯಿ ಯಾವ ರೀತಿ ಸಹಾಯ ಮಾಡುತ್ತಾಳೆ ಅನ್ನೋದು ಚಿತ್ರದಲ್ಲಿದೆ. ಇನ್ನು ಕಡಿಮೆ ಅಂಕ ಬರಲು ಕಾರಣ ಏನು ಎನ್ನುವುದಕ್ಕೆ ಪ್ರಮೋದ್ ಅವರು ಕೊಡುವ ರೀಸನ್ ಹೀಗಿದೆ – ದೇರಿ ಇಸ್ ಸಿಂಗಲ್ ಲೇಡಿ ಲೆಕ್ಚರರ್ ಇನ್ ದಿಸ್ ಕಾಲೇಜ್. ಓನ್ಲಿ ಫೆದರ್ ನೋ ಫಿಗರ್ʼʼ ಅಂತಿರುತ್ತದೆ. ಇಡೀ ಸಿನಿಮಾದಲ್ಲಿ ಸಂಭಾಷಣೆ ಪ್ರಾಮುಖ್ಯತೆ ಪಡೆಯುತ್ತದೆ. ಎಂಬಿತ್ಯಾದಿ ವಿವರಗಳನ್ನು ನಿರ್ದೇಶಕ ಕೇಶವ್ ಎಸ್ ಇಂಡಲವಾಡಿ ಕೇಶವ್ ಎಸ್ ಇಂಡಲವಾಡಿ ನೀಡಿದರು. ಶಾಲಾ ಕಾಲೇಜು ದಿನಗಳಿಂದಲೂ ಸ್ಕಿಟ್, ಶಾರ್ಟ್ ಫಿಲ್ಮ್ ಗಳಲ್ಲಿ ತೊಡಗಿಸಿಕೊಂಡಿದ್ದ ಕೇಶವ್ ಎಸ್ ಇಂಡಲವಾಡಿ 2015ರಲ್ಲಿ ದೊರೈ ಭಗವಾನ್ ಅವರ ಬಳಿ ನಿರ್ದೇಶನದ ಕೋರ್ಸು ಮುಗಿಸಿದವರು.

ನಂತರ ಸಿಂಪಲ್ ಸುನಿ ಅವರೊಂದಿಗೆ ʻಆಪರೇಷನ್ ಅಲಮೇಲಮ್ಮʼ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕಳೆದ ಒಂದು ವರ್ಷದಿಂದ ಕೂತು ಕತೆ ಸಿದ್ದಪಡಿಸಿ ಈಗ ಚೊಚ್ಚಲ ನಿರ್ದೇಶನ ಆರಂಭಿಸಿದ್ದಾರೆ. ʻʻನಮ್ಮ ನಿರ್ದೇಶಕರು ಬಹಳ ಹಿಂದೆಯೇ ಕತೆ ಹೇಳಿದ್ದರು. ಇಡೀ ಸಿನಿಮಾವನ್ನು ಡೈಲಾಗ್ ಸಮೇತ ಎರಡು ಗಂಟೆ ಹಾಗೇ ನರೇಷನ್ ಮಾಡ್ತಾರೆ. ಸಾಕಷ್ಟು ವರ್ಕ್ ಮಾಡಿಕೊಂಡಿದ್ದಾರೆ. ತೆರೆಗೆ ಏನು ಕೊಡಬೇಕು ಎನ್ನುವುದರ ಕ್ಲಾರಿಟಿ ಇದೆ. ʻರತ್ನನ್ ಪ್ರಪಂಚʼದ ನಂತರ ನನಗೆ ಬಹುತೇಕ ಮಾಸ್ ಮತ್ತು ಆಕ್ಷನ್ ಸಬ್ಜೆಕ್ಟುಗಳೇ ಬರುತ್ತಿವೆ. ಈ ನಡುವೆ ಇಂಥದ್ದೊಂದು ಜಾನರಿನ ಸಿನಿಮಾ ಇರಲಿ ಅಂತಾ ತುಂಬಾ ಇಷ್ಟ ಪಟ್ಟು ಒಪ್ಪಿಕೊಂಡಿದ್ದೀನಿʼʼ ಎನ್ನುವುದು ನಾಯಕ ನಟ ಪ್ರಮೋದ್ ಮಾತು. ʻʻನಾನು ನಿಜ ಜೀವನದಲ್ಲಂತೂ rank ಸ್ಟೂಡೆಂಟ್ ಆಗಿರಲಿಲ್ಲ. ಆದರೆ ಅಲಂಕಾರ್ ವಿದ್ಯಾರ್ಥಿಯ ಪಾತ್ರದ ಮೂಲಕ ಆ ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದೇನೆʼʼ ಎಂದು ನಾಯಕ ನಟಿ ಅರ್ಚನಾ ಕೊಟ್ಟಿಗೆ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ರೋಹಿತ್ ಗೌಡ, ಯೋಗೇಶ್ ಶ್ರೀನಿವಾಸ್ ಮತ್ತು ಮಧು ಆರಾಧ್ಯ ಕೂಡಾ ಸಿನಿಮಾ ಆರಂಭಗೊಂಡ ಬಗೆಯನ್ನು ವಿವರಿಸಿದರು. ಬೆಂಗಳೂರಿನಲ್ಲಿ 45 ದಿನಗಳ ಚಿತ್ರೀಕರಣ ನಡೆಸಿ, ಹಾಡುಗಳಿಗೆ ಮಾತ್ರ ಚಿಕ್ಕಮಗಳೂರು ಸೇರಿದಂತೆ ಇತರೆ ಕಡೆಗೆ ಹೋಗಲಿದೆ ಚಿತ್ರತಂಡ. ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪ್ರಮೋದ್ ಅವರ ತಂದೆ –ತಾಯಿ ಪಾತ್ರದಲ್ಲಿ ಅಚ್ಯುತ್ ಮತ್ತು ಸುಧಾ ಬೆಳವಾಡಿ ಕಾಣಿಸಿಕೊಳ್ಳಲಿದ್ದಾರೆ. ಸ್ನೇಹಿತರಾಗಿ ರಜನೀಕಾಂತ್ ಮತ್ತು ನಿತಿನ್ ಅದ್ವಿ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನೀಡುತ್ತಿದ್ದಾರೆ. ನಾಲ್ಕು ಹಾಡುಗಳಿದ್ದು, ಅದರಲ್ಲಿ ಎರಡು ಹಾಡುಗಳಿಗೆ ಸ್ವತಃ ನಿರ್ದೇಶಕ ಕೇಶವ್ ಅವರೇ ಸಾಹಿತ್ಯ ಬರೆಯುತ್ತಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.