ವಿ ಮನೋಹರ್ ಅವರ ಚಾಟ್ ಮಸಾಲ
ವಿ ಮನೋಹರ್ ಅವರ ಚಾಟ್ ಮಸಾಲ!

ಲಾಕ್ಡೌನ್ ಮುಗಿದೇಹೋಯಿತು. ಈ ಅವಧಿಯಲ್ಲಿ ಎಲ್ಲಾ ಭಾಷೆಯ ಚಿತ್ರರಂಗದ ಅನೇಕರು ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಬಿಟ್ಟರು. ಎಲ್ಲರಿಗೂ ಸ್ಪೂರ್ತಿ ಅಮಿತಾಭ ಬಚ್ಚನ್. ಅವರು ಎಲ್ಲರಿಗಿಂತ ಮೊದಲು ಆರು ನಿಮಿಷದ ಒಂದು ವಿಡಿಯೋ ವನ್ನು ಏಪ್ರಿಲ್ ಮೊದಲ ವಾರದಲ್ಲಿ ಬಿಟ್ಟಿದ್ದರು. ಅದನ್ನು ನೋಡಿ ಎಲ್ಲರೂ ಪುಳಕಿತರಾಗಿ ತಾವು ಒಂದೊಂದು ವಿಡಿಯೋ ಬಿಟ್ಟರು. ಇವೆಲ್ಲ ನಾಲ್ಕು ನಿಮಿಷ, ಐದು ನಿಮಿಷಗಳ ವಿಡಿಯೋಗಳು. ಇನ್ನೇನು ಲಾಕ್ಡೌನ್ ಮುಗಿದೇಹೋಯಿತು ಅಂದಾಗ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ ವಿ. ಮನೋಹರ್ ಅವರು 45 ನಿಮಿಷದ ಒಂದು ಸಣ್ಣ ಚಲನಚಿತ್ರವನ್ನೇ ಮಾಡಿ ಮಲ್ಲಿಗೆ ಮೂವೀಸ್ ಲಾಂಛನದಲ್ಲಿ ಯೂಟ್ಯೂಬಲ್ಲಿ ಬಿಟ್ಟಿದ್ದಾರೆ.
ಇಷ್ಟು ತಡವಾಗಿ ನೀವೇಕೆ ಎಚ್ಚೆತ್ತುಕೊಂಡಿರಿ ಎಂದು ನಮ್ಮ ಪ್ರತಿನಿಧಿ ಕೇಳಿದಾಗ ಮನೋಹರ ಉತ್ತರಿಸಿದ್ದು ಹೀಗೆ : "ಇದೊಂದು ಸಂಗೀತಮಯ ಚಿತ್ರ. ಇದರಲ್ಲಿ 20 ಹಾಡುಗಳಿವೆ. ಹಾಡಿಂದ ಪ್ರಾರಂಭವಾಗಿ ಹಾಡಲ್ಲಿ ಮುಗಿಯುತ್ತದೆ. ನಾನೇ ಹಾಡು ಬರೆದು ನಾನೇ ರಾಗ ಸಂಯೋಜನೆ ಮಾಡಿ ಅದಕ್ಕೆ ಸಂಗೀತ ಜೋಡಿಸಲು ನನ್ನ ಗೆಳೆಯರಿಗೆ ಕೊಟ್ಟೆ. ಈ ಹಾಡುಗಳಿಗೆ 9 ಮಂದಿ ಪ್ರೋಗ್ರಾಮಿಂಗ್ ಮಾಡಿದ್ದಾರೆ. ನಾನು ನನ್ನ ಕೆಲಸವನ್ನು ಏಪ್ರಿಲ್ ಇಪ್ಪತ್ತಕ್ಕೆ ಪ್ರಾರಂಭಿಸಿದ್ದರು ಸಂಗೀತಗಾರರು ಅದಕ್ಕೆ ವಾದ್ಯ ಜೋಡಣೆ ಮಾಡುವಾಗ ಸ್ವಲ್ಪ ತಡವಾಯಿತು.

ಆಗ ಯಾವ ಸ್ಟುಡಿಯೋಗಳು ತೆರೆಯುವ ಹಾಗಿರಲಿಲ್ಲ. ರೆಕಾರ್ಡಿಂಗ್ ಬಂದ್ ಆಗಿತ್ತು. ಯಾರು ಮನೆಯಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದಾರೆ ಅಂಥವರನ್ನೇ ಹುಡುಕಿ ರೆಕಾರ್ಡಿಂಗ್ ಮಾಡಲು ಅವಲಂಬಿಸಬೇಕಾಗಿತ್ತು. ನನಗೋಸ್ಕರ ಎಲ್ಲರೂ ಅಂದವಾಗಿ ಮಾಡಿಕೊಟ್ಟರು. ನಂತರ ಅದನ್ನೆಲ್ಲ ಕಲಾವಿದರಿಗೆ ವಾಟ್ಸಪ್ಪಲ್ಲಿ ಕಳಿಸಿ ನಿಮ್ಮ ನಿಮ್ಮ ಮೊಬೈಲಲ್ಲಿ ಶೂಟಿಂಗ್ ಮಾಡಿ ಕಳಿಸಿ ಎಂದೆ. ಇಲ್ಲೂ ಕೆಲವು ತಾಂತ್ರಿಕ ದೋಷಗಳಿಂದಾಗಿ ಮತ್ತೆ ತಡವಾಯಿತು" "ಕತೆ ಏನು?" "ಇದರಲ್ಲಿ ಕಥೆ ಎಂಬುದಾಗಿ ಏನಿಲ್ಲ. ಲಾಕ್ಡೌನ್ ಸಮಯದಲ್ಲಿ ಇಂದ್ರಿಯಗಳು, ಹೊಟ್ಟೆಯ ಅವಯವಗಳು ತಮ್ಮ-ತಮ್ಮ ಕಷ್ಟ-ಸುಖವನ್ನು ಹೇಳಿಕೊಳ್ಳುತ್ತವೆ. ಪ್ರತಿ ಅಂಗಾಂಗ ಇಲ್ಲಿ ಮನುಷ್ಯ ರೂಪದಲ್ಲಿ ಅಭಿನಯಿಸುತ್ತವೆ. ಉದಾಹರಣೆಗೆ ಎರಡು ಕಣ್ಣುಗಳ ಪಾತ್ರ ಇಬ್ಬರು ಹುಡುಗಿಯರು ಮಾಡಿದ್ದಾರೆ. ಎರಡು ಕಿವಿಗಳ ಪಾತ್ರ ಕೂಡ ಇನ್ನಿಬ್ಬರು ಹುಡುಗಿಯರು ಮಾಡಿದ್ದಾರೆ. ನಾಲಿಗೆ ಪಾತ್ರ ಶುಭರಕ್ಷಾ ಮಾಡಿದ್ದಾರೆ.
ಮೂಗು ಪಾತ್ರ ಮೂಗು ಸುರೇಶ್, ಹಲ್ಲುಗಳ ಆಗಿ ಮೈಸೂರು ರಮಾನಂದ ಮತ್ತು ರಂಗನಾಥ್ ಮಾಡಿದ್ದಾರೆ. ಈ ಇಂದ್ರಿಯಗಳ ಮತ್ತು ಹೊಟ್ಟೆ ಒಳಗಿನ ಅವಯವಗಳ ಮೀಟಿಂಗ್ ಅನ್ನು ಕೊರೋನ ನೋಡುತ್ತಾನೆ. ಕೊರೋನ ಪಾತ್ರ ಮಿಮಿಕ್ರಿ ದಯಾನಂದ್ ಮಾಡಿದ್ದಾರೆ. ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಮೆದುಳಿನ ಪಾತ್ರ ಮಾಡಿದ್ದಾರೆ. ಲ್ಯಾಪ್ಟಾಪ್ನಲ್ಲಿ ಸುಮ್ಮನೆ ಗೋಳಾಡುತ್ತಾ ಕೂರುವ ಜಾಯಮಾನ ನನ್ನದಲ್ಲ. ಏನಾದರೂ ಮಾಡಬೇಕು ಎಂದು ಯೋಚಿಸಿದೆ. ಮಾತು ,ಹಾಡು ಎಲ್ಲರೂ ಮಾಡಿದ್ದಾರೆ.

ಆದರೆ ಮ್ಯೂಸಿಕಲ್ ಫಿಲ್ಮ್ ಪುಣ್ಯಕ್ಕೆ ಯಾರೂ ಮಾಡಿರಲಿಲ್ಲ. ಹಾಗಾಗಿ ಇದೇ ಸರಿ ಎಂದು ಶುರುಮಾಡಿದೆ. ನಾನಾ ಕಾರಣಗಳಿಂದ ತಡವಾಯಿತು. ಆದರೆ ನನ್ನ ಮಾತಿಗೆ ೨೩ ಕಲಾವಿದರು ಬೆಲೆಕೊಟ್ಟು ಇದರಲ್ಲಿ ಪಾತ್ರ ಮಾಡಿದ್ದಾರೆ. ಅವರಿಗೆಲ್ಲ ನಾನು ಚಿರಋಣಿ. ೧೪ ಮಂದಿ ಗಾಯಕ-ಗಾಯಕಿಯರು ಒಂಬತ್ತು ಮಂದಿ ಸಂಗೀತಗಾರರು ಇದಕ್ಕೆ ದುಡಿದಿದ್ದಾರೆ. ಈ ಚಿತ್ರ ಇವರೆಲ್ಲರ ಶ್ರಮದ ಫಲ. ಕ್ಯಾಮರಾಮ್ಯಾನ್ ಇಲ್ಲ, ಲೈಟ್ಸ್ ಇಲ್ಲ, ಮೇಕಪ್ ಇಲ್ಲ, ಗ್ರಾಫಿಕ್ಸ್ ಇಲ್ಲ, ಸ್ಟುಡಿಯೋ ಇಲ್ಲ, ಅವರವರದೇ ಉಡುಪುಗಳು !!!ಕೇವಲ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದು. ಕಲಾವಿದರೆಲ್ಲ ಅವರವರ ಸ್ನೇಹಿತರಿಂದ, ಅಪ್ಪ-ಅಮ್ಮ ಅಣ್ಣ-ತಮ್ಮಂದಿರ ಮೂಲಕ ಮೊಬೈಲಲ್ಲಿ ಶೂಟಿಂಗ್ಮಾಡಿಕೊಟ್ಟರು. ಹಾಗಾಗಿ ಮಾಮೂಲಿ ಚಲನಚಿತ್ರಗಳ ಗುಣಮಟ್ಟ, ದೃಶ್ಯ ವೈಭವಗಳನ್ನೆಲ್ಲ ಇದರಲ್ಲಿ ನಿರೀಕ್ಷೆ ಮಾಡಬಾರದು. ತಮಾಷೆಗಾಗಿ ನೋಡಬೇಕಷ್ಟೇ.
"ಎಲ್ಲೆಲ್ಲಿ ನೋಡಬಹುದು?" "ಯೂಟ್ಯೂಬಲ್ಲಿ ಮಲ್ಲಿಗೆ ಮೂವೀಸ್ ಲಾಂಛನದಲ್ಲಿ VM's CHAT MASALA ಎಂದು ಒತ್ತಿದರೆ ನೋಡಲು ಸಿಗುತ್ತದೆ. ಫೇಸ್ಬುಕ್ ಪೇಜಲ್ಲಿ, ಟ್ವಿಟರ್, ಇನ್ಸ್ಟಾ ಗ್ರಾಮಲ್ಲಿ ಮಲ್ಲಿಗೆ ಮೂವೀಸ್ VM's CHAT MASALA ಎಂದು ಟೈಪ್ ಮಾಡಿದರೆ ಇದು ಸಿಗುತ್ತದೆ. "ಲಾಕ್ಡೌನ್ ಅವಧಿಯಲ್ಲಿ ಇಷ್ಟೊಂದು ದೊಡ್ಡ ಸಿನಿಮಾ ಯಾರೂ ಮಾಡಿರಲಿಲ್ಲ. ಅಂಥ ಪ್ರಯತ್ನ ಮಾಡಿದ್ದೀರಿ. ನಿಮ್ಮ ಪ್ರಯತ್ನ ಜನರಿಗೆ ಇಷ್ಟವಾಗಲಿ. All the Best.!"
Recent comments