ಬಿಷಪ್ ಕಾಟಾನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜಿನಲ್ಲಿ ಕನ್ನಡ ರಾಜೋತ್ಸವ.
*ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಕನ್ನಡ ಭಾಷಾ ಬೆಳವಣಿಗೆ ವಿದ್ಯಾರ್ಥಿಗಳ ಜವಾಬ್ದಾರಿ- ಉಪಸಭಾಪತಿ ಡಾ. ಉಮಾಶ್ರೀ*
*ಬೆಂಗಳೂರು:* ಕನ್ನಡ ಎಂದರೆ ಕೇವಲ ಭಾಷೆಯಲ್ಲ; ಅದೊಂದು ಶಕ್ತಿ, ಸಂಸ್ಕೃತಿ, ಪರಂಪರೆ- ಕನ್ನಡಿಗರ ಅಸ್ಮೀತೆಯ ಪ್ರತೀಕ; ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ಪ್ರತಿ ವಿದ್ಯಾರ್ಥಿ ಮೇಲಿದೆ ಎಂದು ಕರ್ನಾಟಕ ವಿಧಾನಪರಿಷತ್ತಿನ ಉಪಸಭಾಪತಿಗಳು ಹಾಗೂ ಹಿರಿಯ ಕಲಾವಿದರಾದ ಡಾ. ಉಮಾಶ್ರೀ ಅವರು ಹೇಳಿದ್ಧಾರೆ.
ಬೆಂಗಳೂರಿನ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜಿನ ಕನ್ನಡ ಸಂಘ ʼಗಂಧದ ಗುಡಿ- ಚಂದದ ಗುಡಿʼ ವತಿಯಿಂದ ಬುಧವಾರ ಬೆಳಿಗ್ಗೆ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪಸಭಾಪತಿಗಳು, ಕನ್ನಡ ಕೇವಲ ಪ್ರೀತಿಸುವುದಷ್ಟೇ ಅಲ್ಲ; ಅದನ್ನು ಓದುವ, ಬರೆಯುವ, ಮಾತನಾಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಹೇಳಿದರು.
*ಪ್ರತಿಯೊಬ್ಬರೂ ಡಾ. ಬಿ.ಆರ್. ಅಂಬೇಡ್ಕರ್* ವಿದ್ಯಾರ್ಥಿಗಳಲ್ಲಿ ಭಾಷೆಯ ಜೊತೆಗೆ ಪ್ರಜಾಪ್ರಭುತ್ವದ ಆಶಯಗಳು, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಿಕ ಮೌಲ್ಯಗಳು ಅವಶ್ಯಕ. ಅದರಲ್ಲೂ ಕಾನೂನು ವಿದ್ಯಾರ್ಥಿಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು, ಹೋರಾಟ ಮತ್ತು ಜ್ಞಾನ ಪ್ರತಿಯೊಬ್ಬರಿಗೂ ದಾರಿದೀಪ.
ಪ್ರತಿಯೊಬ್ಬರೂ ಅಂಬೇಡ್ಕರ್ ಅವರಂತೆ ಆಗುವುದು ಎಂದರೆ ಅವರ ಉನ್ನತ ಆದರ್ಶಗಳು, ಶಿಕ್ಷಣದ ಮೇಲಿನ ಅಚಲ ನಂಬಿಕೆ ಮತ್ತು ಸಾಮಾಜಿಕ ನ್ಯಾಯದ ಹೋರಾಟವನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಡಾ. ಉಮಾಶ್ರೀ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದೇ ವೇಳೆ ಉಪಸಭಾಪತಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಎಸ್. ಇಂದಿರಣಿ, ಕಾಲೇಜಿನ ಉಪನ್ಯಾಸಕರು ಹಾಗೂ ಕನ್ನಡ ಸಂಘದ ಸಂಯೋಜಕರಾದ ಎನ್. ನಳಿನಾ, ಕನ್ನಡ ಸಂಘದ ಕಾರ್ಯದರ್ಶಿಯಾದ ಕಾನೂನು ವಿದ್ಯಾರ್ಥಿನಿ ಚಂದನಾ ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಸದಸ್ಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಉಪಸಭಾಪತಿ ಅವರನ್ನು ಕಾಲೇಜಿನ ಮಹಿಳಾ ಡೊಳ್ಳು ಕುಣಿತದ ತಂಡ, ಎನ್ ಸಿಸಿ ಕೆಡೆಟ್ ಗಳು ಅತ್ಯಂತ ಆದರದಿಂದ ಬರಮಾಡಿಕೊಂಡರು.
Recent comments