ನಿತೀಶ್ ರಾಣಾ ಶತಕ ದೆಹಲಿಗೆ ರೋಚಕ ಜಯ
ನಿತೀಶ್ ರಾಣಾ ಶತಕ: ದೆಹಲಿಗೆ ರೋಚಕ ಜಯ
ದೆಹಲಿ: ನಿತೀಶ್ ರಾಣಾ ಅವರ (ಅಜೇಯ 105) ಬಿರುಗಾಳಿ ಶತಕ ಮತ್ತು ಆರಂಭಿಕರಾದ ಕುನಾಲ್ ಚಂದೇಲಾ (75) ಹಾಗೂ ಹಿಟೆನ್ ದಲಾಲ್(82) ಅವರ ಅರ್ಧಶತಕಗಳ ಬಲದಿಂದ ದೆಹಲಿ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು.
ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಂದ ದ್ವಿತೀಯ ಇನಿಂಗ್ಸ್ ಆರಂಭಿಸಿದ ದೆಹಲಿ 73 ಓವರ್ ಗಳಿಗೆ 4 ವಿಕೆಟ್ ನಷ್ಟಕ್ಕೆೆ 348 ರನ್ ಗಳಿಸಿ ಜಯ ನಗೆ ಬೀರಿತು. ದೆಹಲಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ನಿತೀಶ್ ರಾಣಾ ಕೇವಲ 68 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಯೊಂದಿಗೆ ಸ್ಫೋಟಕ 105 ರನ್ ಗಳಿಸಿದರು. ರಾಣಾ ಅವರ ಅದ್ಭುತ ಇನಿಂಗ್ಸ್‌ನಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಚಂದೇಲಾ 146 ಎಸೆತಗಳಲ್ಲಿ 75 ಹಾಗೂ ಹಿಟೆನ್ ದಲಾಲ್ 146 ಎಸೆತಗಳಲ್ಲಿ 82 ರನ್ ಗಳಿಸಿದ್ದರು. ನಾಯಕ ಧ್ರುವ್ ಶೋರೆ 44 ಮತ್ತು ವಿಕೆಟ್ ಕೀಪರ್ ಅನುಜ್ ರಾವತ್ ಔಟಾಗದೆ 18 ರನ್ ಗಳಿಸಿದರು. ದೆಹಲಿ ಆಡಿರುವ ಐದು ಪಂದ್ಯಗಳಲ್ಲಿ ಎರಡನೇ ಗೆಲುವು ಇದಾಗಿದೆ. ಚಾಂಪಿಯನ್ ವಿದರ್ಭ ಐದು ಪಂದ್ಯಗಳಲ್ಲಿ ಮೊದಲ ಸೋಲು ಇದಾಯಿತು.
Recent comments